ಮುಖ ಪುಟ > ವಸಾಹತು ಪ್ರಜ್ಞೆಯ ವಿಶ್ವರೂಪ, Cultural Studies > ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಅಂಕಣ: ವಸಾಹತು ಪ್ರಜ್ಞೆಯ ವಿಶ್ವರೂಪ

ಕಂತು 58: ವ್ಯಕ್ತಿ ಮತ್ತು ಸಮಾಜ: ಪೂರ್ವ ಪಶ್ಚಿಮಗಳ ಭಿನ್ನತೆ
ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದಿನ ವಿದ್ಯಾವಂತ ಆಧುನಿಕರಿಗೂ, ಅವಿದ್ಯಾವಂತ ಸಂಪ್ರದಾಯಸ್ಥರಿಗೂ ನಡುವೆ ಒಂದು ವ್ಯತ್ಯಾಸವು ಎದ್ದು ಕಾಣುವಂತಿದೆ. ಇಂದಿನವರಿಗೆ ವ್ಯಕ್ತಿ ಸ್ವಾತಂತ್ರ್ಯದ ಅರಿವು ಬಹಳ ಮುಖ್ಯ. ಒಬ್ಬನಿಗೆ/ಳಿಗೆ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳುವುದು ಅತ್ಯಂತ ಮುಖ್ಯ ಎನ್ನಿಸುತ್ತದೆ. ತನ್ನ ಜೀವನಕ್ಕೆ ಸಂಬಂಧಿಸಿ ತಾನೇ ನಿರ್ಣಯ ತೆಗೆದುಕೊಳ್ಳುವುದು ಮುಖ್ಯ ಎನ್ನಿಸುತ್ತದೆ. ನಮ್ಮ ಸುತ್ತಲಿನ ಬಂಧುಗಳು ಹಾಗೂ ಹಿರಿಯರು ತಮ್ಮನ್ನು ಹತ್ತಿಕ್ಕಲಿಕ್ಕೇ ಇರುವರೇನೋ ಎಂಬಂತೇ ಭಾವಿಸಿಕೊಂಡು ಅವರಿಂದ ತನ್ನ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಇಂದಿನ ಯುವಕ ಯುವತಿಯರ ಭಾಷೆಯಲ್ಲಿ ಹೇಳುವುದಾದರೆ ಹಿರಿಯರು ತಮ್ಮ ಅಭಿಪ್ರಾಯವನ್ನು ಅವರ ಮೇಲೆ ಹೇರಲು ಬರುತ್ತಾರೆ. ಅದರಂತೇ ಇಂದಿನ ವಿಮೋಚನಾವಾದಿಗಳು ಹೇಳುವಂತೇ, ‘ಹಿಂದಿನ ಕಾಲದಲ್ಲಿ ನಮ್ಮ ಅಪ್ಪ ಅಮ್ಮಂದಿರಿಗೆ ತಮ್ಮದೇ ಧ್ವನಿ ಇರಲಿಲ್ಲ. ಅವರ ಜೀವನವನ್ನು ರೂಪಿಸಿದವರೇ ಹಿರಿಯರು’. ಅವರ ಒಪ್ಪಿಗೆಯನ್ನೂ ಕೇಳದೇ ಅವರ ಮದುವೆಯನ್ನು ಹಿರಿಯರು ತಾವೇ ನಿಶ್ಚಯಮಾಡುತ್ತಿದ್ದರು, ಇಂಥದ್ದೇ ರೀತಿಯಲ್ಲಿ ಜೀವಿಸಬೇಕೆಂದು ನಿರ್ಬಂಧಿಸಿದ್ದರು, ಅನೇಕ ಕಠಿಣ ಪದ್ಧತಿಗಳನ್ನು ಹಾಗೂ ಆಚರಣೆಗಳನ್ನು ಒತ್ತಾಯಪೂರ್ವಕವಾಗಿ ಹೇರುತ್ತಿದ್ದರು. ಇವರೂ ಕೂಡ ಅವರಿವರಿಗೆ ಇಷ್ಟ ಎಂದೋ, ಅವರಿವರು ಆಡಿಕೊಳ್ಳುತ್ತಾರೆ ಎಂದೋ, ಭೀತರಾಗಿಯೋ ಮನಸ್ಸಿಲ್ಲದೇ ಮೌನವಾಗಿ ಅವನ್ನು ಅನುಭವಿಸುತ್ತಿದ್ದರು. ಇಷ್ಟೇ ಅಲ್ಲ, ಅವರ ಜೀವನವೇ ವ್ಯರ್ಥವಾಯಿತು ಹಾಗೂ ಇಂಥ ಜೀವನದಲ್ಲಿ ಶೋಷಣೆ, ತೊಳಲಾಟ ಹಾಗೂ ದುರಂತವಲ್ಲದೇ ಬೇರೇನೂ ಇರಲಾರದು ಎಂಬಂತೇ ಬಿಂಬಿಸಲಾಗುತ್ತದೆ.

ಏಕೆ ಇಂಥ ಜೀವನವು ವ್ಯರ್ಥವೆಂದರೆ ತಮ್ಮ ಇಚ್ಛೆಯ ಪ್ರಕಾರ ಜೀವನವನ್ನು ರೂಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅಂದರೆ, ಮನುಷ್ಯರು ತಮ್ಮ ಇಚ್ಛೆಯ ಪ್ರಕಾರ ಜೀವನ ನಡೆಸಿದರೆ ಮಾತ್ರ ಜೀವನವು ಸಾರ್ಥಕವಾಗುತ್ತದೆ ಎಂಬ ನಂಬಿಕೆ ಇವರೆಲ್ಲರಿಗೂ ಇರುವುದು ಸ್ಪಷ್ಟ. ಕೇಳಲಿಕ್ಕೇನೋ ಇದು ಹಿತವಾಗಿದೆ. ಆದರೆ ಸ್ಪಷ್ಟವಾಗುವುದಿಲ್ಲ. ಅಂದರೆ ನಮ್ಮ ಹಿರಿಯರು ಕೇವಲ ತಮ್ಮ ಹಿರಿಯರ ಇಚ್ಛೆ ಹಾಗೂ ನಿರ್ಣಯವನ್ನಾಧರಿಸಿಯೇ ಬದುಕಿದ್ದರೆ? ಅವರ ಜೀವನದಲ್ಲಿ ಅವರಿಗೆ ಬೇಕಾದಂತೆ ಏನನ್ನೂ ಮಾಡಿಕೊಳ್ಳಲಿಲ್ಲವೆ? ಅವರ ಜೀವನದಲ್ಲಿ ಸುಖದ ಕ್ಷಣಗಳೇ ಇರಲಿಲ್ಲವೆ? ಅಥವಾ ಅವರ ಜೀವನವನ್ನು ಅವರು ರೂಪಿಸಿಕೊಂಡೇ ಇಲ್ಲವೆ? ಈ ಪ್ರಶ್ನೆಗಳಿಗೆ ಸಂಪೂರ್ಣವಾಗಿ ನಕಾರಾತ್ಮಕ ಉತ್ತರ ನೀಡುವುದು ನಮ್ಮ ಅನುಭವಕ್ಕೆ ವಿರುದ್ಧವಾದ ಹೇಳಿಕೆಯಾಗಬಹುದು. ಅದೇ ರೀತಿಯಲ್ಲಿ ಮತ್ತೊಂದು ಥರದ ಪ್ರಶ್ನೆಗಳು ಏಳುತ್ತವೆ: ಸ್ವ ಇಚ್ಛೆಯ ಪ್ರಕಾರ ಜೀವಿಸುತ್ತೇವೆನ್ನುವವರು ನಿಜವಾಗಿಯೂ ಅಂಥ ಮುಕ್ತ ಜೀವನವನ್ನು ನಡೆಸಲು ಸಾಧ್ಯವೆ? ಅಂದರೆ, ಪ್ರತೀ ವ್ಯಕ್ತಿಯೂ ತನಗೆ ಬೇಕಾದ ಹಾಗೆ ಇರುತ್ತೇನೆ ಎಂದರೆ ಯಾವುದೇ ಸಮಾಜವು ತನ್ನ ಅಸ್ತಿತ್ವವನ್ನು ಇಟ್ಟುಕೊಳ್ಳಲು ಹೇಗೆ ಸಾಧ್ಯ? ಅಂಥವರಿಗೆ ಸಂಬಂಧಗಳು ಹೇಗೆ ಸಾಧ್ಯ? ಸಮಾಜಕ್ಕೆ ಇರುವ ನಮ್ಮ ಬಾಧ್ಯಸ್ತಿಕೆಯನ್ನು ಹೇಗೆ ನಿರ್ವಹಿಸುವುದು? ನಾವೇ ತೆಗೆದುಕೊಂಡ ನಿರ್ಣಯಗಳು ಸ್ವಂತವೆಂದು ಹೇಗೆ ಹೇಳುತ್ತೀರಿ? ಪ್ರಚಲಿತ ವಿಚಾರಗಳು, ಪೂರ್ವಾಗ್ರಹಗಳು, ವ್ಯವಸ್ಥೆಗಳು, ನಮ್ಮ ಇಚ್ಛೆಗಳನ್ನು ನಿಯಂತ್ರಣ ಮಾಡುತ್ತಿಲ್ಲವೆಂದು ಹೇಗೆ ಹೇಳುತ್ತೀರಿ? ಇಂಥ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರವಿಲ್ಲ. ಹಾಗಾಗಿ ನಮ್ಮ ಜೀವನವನ್ನು ನಿರ್ಣಯಿಸಲು ನಾವು ಸ್ವತಂತ್ರರು ಎಂಬ ಹೇಳಿಕೆಯು ಕೂಡ ಅನುಭವಕ್ಕೆ ನಿಲುಕುವುದಿಲ್ಲ.

ಇಂಥ ಪ್ರಶ್ನೆಗಳಿಗೆ ಉತ್ತರವಿಲ್ಲ. ಏಕೆಂದರೆ ಇಂಥ ಪ್ರತಿಪಾದನೆಗಳನ್ನು ಮಾಡುತ್ತಿರುವಾಗ ನಾವು ಪಾಶ್ಚಾತ್ಯರಿಗೇ ಬಗೆಹರಿಯದ ಅವರ ವಿಚಾರಗಳನ್ನು ನಮ್ಮ ಆದರ್ಶವೆಂಬುದಾಗಿ ಸ್ವೀಕರಿಸಿರುತ್ತೇವೆ. ಪ್ರಸ್ತುತ ಚರ್ಚೆಯ ಹಿಂದಿರುವ ಗ್ರಹಿಕೆಗಳು ಪಾಶ್ಚಾತ್ಯರು ಮನುಷ್ಯ ವ್ಯಕ್ತಿತ್ವದ ಕುರಿತು ಕಟ್ಟಿಕೊಂಡ ನಂಬಿಕೆಯನ್ನಾಧರಿಸಿವೆ. ಮನುಷ್ಯನೆಂದರೆ ಅವರ ಪ್ರಕಾರ ದೇಹ ಹಾಗೂ ಸೆಲ್ಫ್ಗಳೆಂಬ (ಸ್ವಂತಿಕೆ) ಎರಡು ಅಂಗಗಳನ್ನು ಹೊಂದಿರುತ್ತಾನೆ. ಸ್ವಂತಿಕೆಯೆಂಬುದು ಮನುಷ್ಯನ ಆಂತರಿಕ ಅಂಗ ಹಾಗೂ ಅದು ಅವನ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಅದು ಸ್ವಾಯತ್ತವಾದುದು ಹಾಗೂ ನಿರಾವಲಂಬಿ. ಸಮಾಜದಲ್ಲಿ ಉಳಿದ ವ್ಯಕ್ತಿಗಳು ಇರಬಹುದು, ಇಲ್ಲದೆಯೂ ಇರಬಹುದು, ಅದಕ್ಕೂ ಒಬ್ಬನ ವ್ಯಕ್ತಿತ್ವದ ರಚನೆಗೂ ಸಂಬಂಧವಿಲ್ಲ. ಒಬ್ಬನ ವ್ಯಕ್ತಿತ್ವವು ತನ್ನೊಳಗೇ ವಿಕಾಸಗೊಂಡು ರೂಪುಗೊಳ್ಳುವ ಪ್ರಕ್ರಿಯೆಯಾಗಿದೆ ಹಾಗೂ ಅದು ಅನನನ್ಯವಾಗಿರುತ್ತದೆ. ಒಬ್ಬನು ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಳ್ಳುತ್ತ ಹೋಗಬೇಕು. ಅಂದರೆ ತಾನು ಯಾರು ಎಂಬುದನ್ನು ಗ್ರಹಿಸುವುದರಿಂದ ಹಿಡಿದು, ತಾನು ಏನಾಗಬೇಕು? ಎನ್ನುವವರೆಗೂ ಅದರ ಬೆಳವಣಿಗೆಯಾಗುತ್ತದೆ. ಈ ಬೆಳವಣಿಗೆಯು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೆ ನಡೆಯುತ್ತದೆ. ಯಾರು ಈ ಕುರಿತು ಸ್ಪಷ್ಟತೆಯನ್ನು ಹೊಂದಲು ಸಮರ್ಥರಾಗುತ್ತಾರೆಯೋ ಅವನೇ ಪ್ರೌಢವ್ಯಕ್ತಿ ಎನ್ನಬಹುದು. ವಯಸ್ಸಿಗೆ ಬಂದ ಮೇಲೂ ಕೆಲವರಿಗೆ ಅದು ಸ್ಪಷ್ಟವಾಗುವುದಿಲ್ಲ. ಅಂಥವರನ್ನು ಮಾನಸಿಕ ಪ್ರೌಢಿಮೆಯನ್ನು ಹೊಂದಿರದವರು ಎಂದು ಗುರುತಿಸಲಾಗುತ್ತದೆ. ಹಾಗೂ ಮನಃಶಾಸ್ತ್ರವು ಅಂಥವರನ್ನು ಅಸ್ವಸ್ಥ ಮನಸ್ಕರು ಎಂಬುದಾಗಿ ಗುರುತಿಸುತ್ತದೆ. ಅಂದರೆ ಪ್ರತಿಯೊಂದು ವ್ಯಕ್ತಿಯ ಬೇಕು ಬೇಡಗಳೂ ಆ ವ್ಯಕ್ತಿತ್ವಕ್ಕೇ ವಿಶಿಷ್ಟವಾಗಿರುತ್ತವೆ. ಹಾಗೂ ಪ್ರೌಢನೊಬ್ಬನಿಗೆ ಅವು ಸ್ಪಷ್ಟವಾಗಿ ತಿಳಿದಿರುತ್ತವೆ.

ಭೂಮಿಯ ಹೋಲಿಕೆಯನ್ನು ನೀಡುವುದಾದರೆ, ಭೂಮಿಯೊಳಗೆ ಅದಕ್ಕೆ ಆಧಾರವಾಗಿ ಕಲ್ಲಿನ ಪದರವು ಹೇಗೋ ಹಾಗೇ ಒಬ್ಬ ವ್ಯಕ್ತಿಗೆ ಅವನ ಸ್ವಂತಿಕೆ ಇರುತ್ತದೆ. ಒಬ್ಬ ವ್ಯಕ್ತಿಯು ಈ ಜಗತ್ತಿನಲ್ಲಿ ಎಷ್ಟು ಸ್ಥೈರ್ಯದಿಂದ ವ್ಯವಹರಿಸಬಲ್ಲವನೆಂಬುದು ಅವನ ಈ ಒಳಪದರವು ಎಷ್ಟು ಗಟ್ಟಿಯಾಗಿದೆ ಎಂಬುದನ್ನವಲಂಬಿಸಿರುತ್ತದೆ. ಅಂದರೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದು ಅಂತರ್ಗತವಾದ ಘನತೆ ಇರುತ್ತದೆ. ಹಾಗೂ ಅದು ಮತ್ತೊಬ್ಬರ ಮೌಲ್ಯಮಾಪನಕ್ಕೆ ಸಿಕ್ಕುವಂಥಹುದಲ್ಲ. ಪ್ರತೀ ವ್ಯಕ್ತಿಯೂ ತನ್ನ ಕೆಲಸಗಳಿಗೆ ತಾನೇ ಕರ್ತೃವಾಗಿರುತ್ತಾನೆ. ತನ್ನ ಬೇಕು ಬೇಕು ಬೇಡಗಳನ್ನು ನಿರ್ಣಯಿಸುತ್ತಾನೆ. ಅದಕ್ಕಿಂತ ಹೆಚ್ಚಾಗಿ ಒಂದು ಸಮಾಜದಲ್ಲಿ ಬದುಕುವಾಗ ತಾನು ಏನು ಮಾಡಿದರೆ ಸರಿ, ಏನು ಮಾಡಿದರೆ ತಪ್ಪು ಎಂಬುದನ್ನು ತಾನೇ ಕಂಡುಕೊಳ್ಳುತ್ತಾನೆ, ಹಾಗೂ ಅವನೇ ಕಂಡುಕೊಳ್ಳಬೇಕು. ಅಂದರೆ ನೈತಿಕ ನಿರ್ಣಯವು ವ್ಯಕ್ತಿಯೊಬ್ಬನ ವಿವೇಚನೆಗೆ ಬಿಟ್ಟಿದ್ದೇ ವಿನಃ ಸಮಾಜವು ಅವನ ಮೇಲೆ ಅದನ್ನು ಹೇರಲು ಬರುವಂತಿಲ್ಲ.

ಇಂಥ ಒಬ್ಬ ಪ್ರೌಢ ವ್ಯಕ್ತಿಯು ಹೊರಜಗತ್ತಿನೊಡನೆ ವ್ಯವಹರಿಸುವಾಗ ಅವನ ಸ್ವಂತಿಕೆಯನ್ನು ಕೇಂದ್ರದಲ್ಲಿ ಇಟ್ಟುಕೊಂಡಿರುತ್ತಾನೆ. ಅಂದರೆ ಅದರ ಅನನ್ಯತೆಯನ್ನು ಕಾಪಾಡುವುದು ಅವನ ಕಾಳಜಿಯಾಗಿರುತ್ತದೆ. ಅವನ/ಳ ಸಂಬಂಧಗಳು ಅವನ/ಳ ಸ್ವಂತಿಕೆಯ ವಿಸ್ತೃತರೂಪಗಳೇ ಆಗಿರುತ್ತವೆ. ಅನ್ಯರೊಂದಿಗಿನ ಒಡನಾಟದಲ್ಲಿ ತನ್ನ ಗುರುತು (ಐಡೆಂಟಿಟಿ-ಅಸ್ಮಿತೆ) ಅರ್ಥಾತ್ ತನ್ನ ಸ್ವಂತಿಕೆಯ ಅನನ್ಯತೆ ಹಾಗೂ ಅದರ ಅಭಿವ್ಯಕ್ತಿಯು ಅವನಿಗೆ ನಿರ್ಣಾಯಕವಾಗುತ್ತದೆ. ಏಕೆಂದರೆ ಅನ್ಯರೂ ಅಂಥವೇ ಅಸ್ಮಿತೆಗಳಾಗಿರುತ್ತಾರೆ. ಇಲ್ಲಿ ಒಬ್ಬರ ಇಚ್ಛೆ ಮತ್ತೊಬ್ಬರ ಅನನ್ಯತೆಯನ್ನು ಧಿಕ್ಕರಿಸುವ ಸಾಧ್ಯತೆಯಿರುತ್ತದೆ. ಹಾಗೂ ಅವರ ಸಂತೋಷ-ತೊಳಲಾಟಗಳೆಲ್ಲವೂ ಅಲ್ಲಿಂದ ಪ್ರಾರಂಭವಾಗುತ್ತವೆ. ಹಾಗೂ ಸಾಮಾಜಿಕ ಜೀವನದಲ್ಲಿ ವ್ಯಕ್ತಿಯೊಬ್ಬನ ಸುಖ-ದುಃಖಗಳ, ನೀತಿ ಅನೀತಿಗಳ, ನ್ಯಾಯ ಅನ್ಯಾಯಗಳ ಸ್ವರೂಪವನ್ನು ಅವರ ಈ ಅನುಭವವೇ ನಿರ್ಧರಿಸುತ್ತದೆ.

ಪಾಶ್ಚಾತ್ಯ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳೆಲ್ಲವೂ ವ್ಯಕ್ತಿಯೊಬ್ಬನನ್ನು ಈ ಮೇಲಿನಂತೆ ಲಕ್ಷಣೀಕರಿಸಿಕೊಂಡೇ ತಮ್ಮ ವಾದಗಳನ್ನು ಕಟ್ಟುತ್ತವೆ. ಅಂಥ ಚಿಂತನೆಗಳಲ್ಲಿನ ನೈತಿಕತೆ, ಅನೈತಿಕತೆಗಳ ಜಿಜ್ಞಾಸೆಗಳು, ಸರಿ ತಪ್ಪುಗಳು, ಎಲ್ಲವೂ ಮನುಷ್ಯನ ಕುರಿತ ಈ ಪೂರ್ವಗ್ರಹೀತದಿಂದಲೇ ಹುಟ್ಟಿವೆ. ವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆ, ಜನ್ಮಸಿದ್ಧವಾದ ಮಾನವ ಹಕ್ಕುಗಳ ಕಲ್ಪನೆಗಳೆಲ್ಲವೂ ಪಾಶ್ಚಾತ್ಯ ಚಿಂತನೆಗಳಲ್ಲಿ ನಿರ್ಣಾಯಕ ಸ್ಥಾನವನ್ನು ಪಡೆಯುವುದು ಈ ಕಾರಣದಿಂದಲೇ. ಆ ಸಮಾಜದಲ್ಲಿ ವ್ಯಕ್ತಿವಾದವು (ಇಂಡಿವಿಜ್ಯುವಲಿಸಂ) ಅಲ್ಲಿನ ರಾಜಕೀಯ ಚಿಂತನೆಯ ತಳಹದಿಯಾದುದೂ ಇದಕ್ಕೇ. ಅದನ್ನಾಧರಿಸಿ ಶೋಷಣೆ, ಘನತೆ-ಅವಮಾನಗಳ ಕಲ್ಪನೆಗಳಿಗೂ ನಿರ್ದಿಷ್ಟ ಪಾಶ್ಚಾತ್ಯ ರೂಪಗಳು ಬಂದವು. ಇಂಥ ರಾಜಕೀಯ ಸಾಮಾಜಿಕ ಚಿಂತನೆಗಳನ್ನು ಹಾಗೂ ಅವು ಮನುಷ್ಯರಿಗೆ ಆರೋಪಿಸುವ ಗುಣಸ್ವಭಾವಗಳನ್ನು ಅನ್ಯ ಸಂಸ್ಕೃತಿಗಳಿಗೆ ಸಾರಾಸಗಟಾಗಿ ಅನ್ವಯಿಸುವ ಪೂರ್ವದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ ಈ ಮೇಲಿನ ಪಾಶ್ಚಾತ್ಯ ಅನುಭವಗಳು ಮನುಕುಲಕ್ಕೆ ಸಾರ್ವತ್ರಿಕವೆ? ಇಲ್ಲ ಪಾಶ್ಚಾತ್ಯರಿಗೇ ಸೀಮಿತವೆ? ಈ ಪ್ರಶ್ನೆ ಏಕೆ ಅತ್ಯಂತ ನಿರ್ಣಾಯಕವೆಂದರೆ ಅನ್ಯ ಸಂಸ್ಕೃತಿಗಳಲ್ಲಿ ಮನುಷ್ಯಾನುಭವಗಳು ಇದಕ್ಕೆ ವ್ಯತಿರಿಕ್ತವಾಗಿವೆ ಅಂತಾದಲ್ಲಿ ಈ ನೀತಿ-ಅನೀತಿಯ ಮಾನದಂಡಗಳು ಅವಕ್ಕೆ ಪರಕೀಯವಾಗುತ್ತವೆ. ಹಾಗೂ ಆ ಮೂಲಕ ಈ ರಾಜಕೀಯ ಸಾಮಾಜಿಕ ಚಿಂತನೆಗಳೇ ಅವರಿಗೆ ಅರ್ಥವಾಗುವುದಿಲ್ಲ, ಅಷ್ಟೇ ಅಲ್ಲ, ಅದು ಅಲ್ಲಿನ ಸಮಾಜದಲ್ಲಿ ಹಿಂಸೆಯನ್ನು ಹುಟ್ಟುಹಾಕುತ್ತದೆ.

ನಾನು ಏಶಿಯಾದ ಸಂಸ್ಕೃತಿಗಳನ್ನು ಹಾಗೂ ನಿರ್ದಿಷ್ಟವಾಗಿ ಭಾರತವನ್ನು ಗಮನದಲ್ಲಿಟ್ಟುಕೊಂಡು ಈ ಮೇಲಿನ ಮಾತುಗಳನ್ನು ಹೇಳುತ್ತಿದ್ದೇನೆ. ಏಕೆಂದರೆ ಪಾಶ್ಚಾತ್ಯರು ವ್ಯಕ್ತಿಯೊಬ್ಬನಲ್ಲಿ ಸೆಲ್ಪ್ ಎಂಬುದಾಗಿ ಎನನ್ನು ಗುರುತಿಸುತ್ತಾರೋ ಅದು ಭಾರತೀಯರಲ್ಲಿ ಇಲ್ಲ. ಭಾರತದಲ್ಲಿ ಒಬ್ಬ ವ್ಯಕ್ತಿಯ ಸ್ವಂತಿಕೆಯೆನ್ನುವುದು ಮನುಷ್ಯ ಸಂಬಂಧಗಳಲ್ಲಿ ಹುಟ್ಟುತ್ತದೆ ಹಾಗೂ ಅಲ್ಲೇ ಅಸ್ತಿತ್ವದಲ್ಲಿರುತ್ತದೆ. ಹಾಗಾಗಿ ಅದರ ಸ್ವರೂಪವೂ ಸಾಂದರ್ಭಿಕವಾಗಿ ವ್ಯಕ್ತವಾಗುತ್ತದೆ. ಉದಾಹರಣೆಗೆ, ಇಲ್ಲಿನ ವ್ಯಕ್ತಿಗಳು ಅಪ್ಪ, ಮಗ, ಗಂಡ, ಹೆಂಡತಿ, ಅಣ್ಣ, ತಂಗಿ, ಗುರು ಶಿಷ್ಯ ಇತ್ಯಾದಿಯಾಗಿ ಭಾವಿಸಿಕೊಳ್ಳುತ್ತಿರುತ್ತಾರೆ. ಹಾಗೆ ಭಾವಿಸಿಕೊಳ್ಳುವ ಪ್ರಕ್ರಿಯೆಗೂ ಅವರ ಸ್ವಂತಿಕೆಗೂ ಸಾಮ್ಯತೆಯಿದೆ. ಹಾಗಾಗಿ ಅವರ ಸಂಬಂಧಗಳಿಗನುಸಾರವಾಗಿ ಸ್ವಂತಿಕೆಯ ಕಲ್ಪನೆ ಹುಟ್ಟುತ್ತದೆ. ಅಂದರೆ ನಿಜವಾಗಿಯೂ ಇಲ್ಲಿ ಏನು ನಡೆಯುತ್ತದೆಯೆಂದರೆ, ಮತ್ತೊಬ್ಬರು ನಮ್ಮ ಸ್ವಂತಿಕೆಯನ್ನು ರಚಿಸುತ್ತಿರುತ್ತಾರೆ. ಮತ್ತೊಬ್ಬರು ನಮ್ಮ ಕುರಿತು ಯಾವ ಚಿತ್ರಣವನ್ನು ಕಟ್ಟಿಕೊಡುತ್ತಾರೆ ಎಂಬುದನ್ನಾಧರಿಸಿ ನಾವು ನಮ್ಮ ಕುರಿತ ಸ್ವ ಚಿತ್ರವನ್ನು ಕಟ್ಟಿಕೊಳ್ಳುತ್ತೇವೆ. ಅಂದರೆ ಒಂದು ಸಂಬಂಧದ ಸಂದರ್ಭದಲ್ಲಿ ನನ್ನ ಕುರಿತು ನಾನು ಒಂದು ಸ್ವಚಿತ್ರವನ್ನು ಕಟ್ಟಿಕೊಳ್ಳಲು ಮತ್ತೊಬ್ಬರು ನನ್ನ ಅವರ ಸಂಬಂಧವನ್ನು ಹೇಗೆ ಗ್ರಹಿಸಿದ್ದಾರೆ ಎಂಬುದು ಅವಶ್ಯ.

ಈ ಮೇಲಿನ ವೈಶಿಷ್ಟ್ಯತೆಯನ್ನು ಪಾಶ್ಚಾತ್ಯರಿಗೆ ಹೋಲಿಸಿದರೆ ವೈರುಧ್ಯವು ಸ್ಪಷ್ಟವಾಗುತ್ತದೆ. ಪಾಶ್ಚಾತ್ಯ ವ್ಯಕ್ತಿಯೊಬ್ಬನು ತನ್ನನ್ನು ಮತ್ತೊಬ್ಬರಿಂದ ಪ್ರತ್ಯೇಕಗೊಳಿಸಿಕೊಳ್ಳುವ ಮೂಲಕ ತನ್ನ ಸ್ವಂತಿಕೆಯನ್ನು ಕಟ್ಟಿಕೊಳ್ಳುತ್ತಾನೆ. ತಾನು ಹೇಗೆ ಅನ್ಯರಂತಿಲ್ಲ, ಎಂಬುದನ್ನು ಕಂಡುಕೊಳ್ಳುತ್ತ ಈ ಕೆಲಸ ನಡೆಯುತ್ತದೆ. ಅನ್ಯರು ಈ ಕೆಲಸಕ್ಕೆ ಬೇಕೇ ಬೇಕು, ಆದರೆ ಅವರು ಹಿನ್ನೆಲೆಯಾಗಿರುತ್ತಾರೆ ಅಷ್ಟೆ. ಅನ್ಯರು ನಮ್ಮ ಕುರಿತು ಯಾವ ಚಿತ್ರವನ್ನು ಇಟ್ಟುಕೊಂಡಿದ್ದಾರೆ ಎಂಬುದು ನಮ್ಮ ಸ್ವಂತಿಕೆಯನ್ನು ರಚಿಸುವುದಕ್ಕೆ ಪ್ರಯೋಜನವಿಲ್ಲದ ಸಂಗತಿಯಾಗಿದೆ. ಅದೇ ರೀತಿಯಲ್ಲಿ, ಅಪ್ಪ, ಮಗ, ಗಂಡ ಹೆಂಡತಿ, ಇತ್ಯಾದಿ ಸಂಬಂಧಗಳಿಗೆ ಹೊರತಾಗಿಯೂ, ಅವುಗಳ ಗೈರುಹಾಜರಿಯಲ್ಲೂ, ತನ್ನತನ ಎಂಬುದೊಂದು ಅಸ್ಮಿತೆಯು ಅವನಿಗಿರುತ್ತದೆ. ಆದರೆ ಭಾರತದಲ್ಲಿ ನಮ್ಮ ಸ್ವಂತಿಕೆಯು ಅನ್ಯರು ನಮ್ಮ ಕುರಿತು ರಚಿಸಿದ ಚಿತ್ರಣವನ್ನವಲಂಬಿಸಿರುತ್ತದೆ ಹಾಗೂ ನಿರ್ದಿಷ್ಟವಾಗಿ ಆ ಸಂಬಂಧದಲ್ಲಿ ಮಾತ್ರವೇ ಅದು ವ್ಯಕ್ತವಾಗಿ ಅನುಭವಕ್ಕೆ ಬರುತ್ತದೆ. ಅಂದರೆ, ನಾವು ಮಗ, ಶಿಷ್ಯ ಅಥವಾ ಗೆಳೆಯ ಇತ್ಯಾದಿಯಾಗಿ ತಿಳಿದುಕೊಂಡು ಆ ಪ್ರಕಾರ ವರ್ತಿಸುತ್ತೇವೆ. ಈ ಸಂದರ್ಭಗಳನ್ನು ಬಿಟ್ಟು ಅವಕ್ಕೆ ಅತೀತವಾಗಿ ನಾನು ಎನ್ನುವ ಗುರುತು ನಮಗಿರುವುದಿಲ್ಲ. ಅಂದರೆ ಆ ಸಂಬಂಧದ ನಿರ್ದಿಷ್ಟತೆಯನ್ನು ಹೊರತುಪಡಿಸಿ ಸ್ವಂತಿಕೆ ಎನ್ನುವುದು ಇರುವುದಿಲ್ಲ.

ಒಂದು ಉದಾಹರಣೆಯನ್ನು ನೀಡುವುದಾದರೆ, ನಾವು ಏಕೆ ಒಂದು ನಿರ್ದಿಷ್ಟ ಆಯ್ಕೆಯನ್ನು ಅಥವಾ ಕಾರ್ಯವನ್ನು ಮಾಡಬೇಕು ಎಂಬ ಪ್ರಶ್ನೆಗೆ ಪಾಶ್ಚಾತ್ಯ ಸ್ವಂತಿಕೆಯ ಉತ್ತರ ಹೀಗಿರುತ್ತದೆ: ‘ಅದು ನನ್ನ ಇಚ್ಛೆ, ಏಕೆಂದರೆ ಅದೇ ನನಗೆ ಸರಿಯೆನ್ನಿಸಿದೆ/ನನ್ನ ಅನುಭವವು ಆ ನಿರ್ಣಯವೇ ಸರಿ ಎನ್ನುತ್ತಿದೆ/ಆ ನಿರ್ಣಯದಿಂದಲೇ ನನಗೆ ಒಳ್ಳೆಯದಾಗುತ್ತದೆ ಅಥವಾ ನಾನು ಸಂತೋಷವಾಗಿರುತ್ತೇನೆ ಎಂಬುದು ನನಗೆ ಮನದಟ್ಟಾಗಿದೆ,..’ ಇತ್ಯಾದಿ. ಅಂದರೆ ಅವನು ಒಂದು ನಿರ್ಣಯವನ್ನು ಕೈಗೊಳ್ಳುವಾಗ ಅವನ ಸ್ವಂತಿಕೆಯು ಅವನಿಗೆ ಏನು ಮಾಡಬೇಕೆಂಬುದನ್ನು ತಿಳಿಸುತ್ತದೆ. ಹಾಗಾಗಿ ಹಕ್ಕಿನ ಕಲ್ಪನೆಯು ಅಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುತ್ತದೆ. ಆದರೆ ಭಾರತೀಯನನ್ನು ಕೇಳಿದರೆ ‘ನನ್ನ ಅಪ್ಪ/ಹೆಂಡತಿ/ಮಕ್ಕಳು ಹಾಗೇ ಮಾಡು ಎಂದು ಒತ್ತಾಯಿಸಿದರು, ಹಾಗೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಹಾಗೆ ಮಾಡದಿದ್ದರೆ ನಾಲ್ಕು ಜನ ಏನಂದಾರು?..’ ಇತ್ಯಾದಿ ಉತ್ತರಗಳು ಬರುವುದು ಸಹಜ. ಅಂದರೆ ಭಾರತೀಯನ ಆಯ್ಕೆ ಅಥವಾ ನಿರ್ಣಯದ ಹಿಂದೆ ನಿರ್ದಿಷ್ಟ ಸಂಬಂಧಗಳು, ಸುತ್ತಲಿನ ಸಮಾಜ ಇವೆಲ್ಲವುಗಳು ತನ್ನನ್ನು ಯಾವ ರೀತಿಯಲ್ಲಿ ನೋಡುತ್ತವೆ ಎಂಬುದು ಪರಿಗಣಿಸಬೇಕಾದ ವಿಷಯವಾಗಿದೆ. ಹಾಗೂ ಇತರರು ತನ್ನ ಕುರಿತು ಇಟ್ಟಿರುವ ನಿರೀಕ್ಷೆಯನ್ನಾಧರಿಸಿ ಅವನು ತನ್ನ ಸ್ವಂತಿಕೆಯನ್ನು ಭಾವಿಸಿಕೊಳ್ಳುತ್ತಾನೆ. ಅವನಿಗೆ ತನಗೆ ಏನನಿಸುತ್ತದೆ ಎನ್ನುವುದು ಗೌಣವಾಗುತ್ತದೆ. ಇದು ಏಕಮುಖಿಯಾದ ಸಂಬಂಧವಲ್ಲ. ಈ ವ್ಯಕ್ತಿಯೂ ಕೂಡ ಇತರರ ಸ್ವಂತಿಕೆಗಳನ್ನು ಅದೇ ರೀತಿಯಲ್ಲಿ ರಚಿಸಿಕೊಡುತ್ತಿರುತ್ತಾನೆ. ಹಾಗಾಗಿ ಕರ್ತವ್ಯದ ಕಲ್ಪನೆ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಭಾರತದಲ್ಲಿ ಸ್ವಂತಿಕೆಯ ಕಲ್ಪನೆಯನ್ನು ಮನುಷ್ಯ ಸಂಬಂಧವು ಕಟ್ಟಿಕೊಡುತ್ತದೆ ಅಂತಾದರೆ ಇಲ್ಲಿ ಮನುಷ್ಯ ಸಂಬಂಧದ ಸ್ವರೂಪವು ಬೇರೆ ಇರಲೇಬೇಕು. ಪಾಶ್ಚಾತ್ಯ ಕುಟುಂಬಗಳಲ್ಲಿ ಅಥವಾ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಭಾರತೀಯ ಕುಟುಂಬಗಳಲ್ಲಿ ತಮ್ಮ ಮನೆಯ ಜಗುಲಿಯನ್ನು ಹೇಗೆ ವಿನ್ಯಾಸಗೊಳಿಸಿರುತ್ತಾರೆ ಎಂಬ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರು ತಮ್ಮ ಅಭಿರುಚಿಗೆ ತಕ್ಕಂತೇ ಜಗುಲಿಯನ್ನು ವಿನ್ಯಾಸಗೊಳಿಸಿ ಬಂದವರು ಅದಕ್ಕೆ ತಕ್ಕಂತೇ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸುತ್ತಾರೆ. ಅಂದರೆ ಅವರು ಪೀಠೋಪಕರಣಗಳನ್ನು ಶಾಶ್ವತವಾಗಿ ಜೋಡಿಸಿಟ್ಟು ನಮ್ಮ ಕ್ರಿಯೆಯನ್ನು ನಿರ್ದಿಷ್ಟಗೊಳಿಸುತ್ತಾರೆ, ಇಂಥದ್ದೇ ರಿವಾಜುಗಳನ್ನು ಪಾಲಿಸಬೇಕು ಎಂಬ ನಿರೀಕ್ಷೆಗಳೂ ಇರುತ್ತವೆ. ಹಾಗೂ ಮನೆಗೆ ಬರುವ ಎಲ್ಲರ ಜೊತೆಗೂ ಅತಿಥೇಯರಾಗಿ ಅವರ ಸಂಬಂಧ ಒಂದೇ ಇರುತ್ತದೆ. ಅತಿಥೇಯರು-ಅತಿಥಿಗಳು ಎಂಬ ಸಂಬಂಧವನ್ನು ಬಿಟ್ಟು ಅಲ್ಲಿ ಬೇರೆ ಏನೂ ಕಾಣಿಸುವುದಿಲ್ಲ. ಆದರೆ ಆಧುನೀಕರಣಕ್ಕೆ ಒಳಗಾಗದ ಅಚ್ಚ ಭಾರತೀಯ ಕುಟುಂಬವೊಂದರ ಜಗುಲಿಯನ್ನು ಗಮನಿಸಿ. ಅದು ವಿನ್ಯಾಸರಹಿತ ಖಾಲಿ ಜಾಗವಾಗಿರುತ್ತದೆ. ಮನೆಗೆ ಬಂದ ಅತಿಥಿಗಳಿಗನುಗುಣವಾಗಿ ಅದು ವಿನ್ಯಾಸವನ್ನು ಪಡೆದುಕೊಳ್ಳುತ್ತದೆ. ಬಂದವರು ಎಲ್ಲಿ ಕೂಡ್ರುತ್ತಾರೆ, ಹೇಗೆ ಕೂಡ್ರುತ್ತಾರೆ, ಖುರ್ಚಿಯೋ, ಜಮುಖಾನವೋ, ನೆಲವೊ, ಪಕ್ಕಕ್ಕೋ, ದೂರದಲ್ಲೋ, ಅವರನ್ನು ಉಪಚರಿಸುವ ರೀತಿ, ಮಾತನಾಡುವ ಧಾಟಿ, ಹಾವ ಭಾವಗಳು, ಇವೆಲ್ಲವೂ ಬಂದವರಿಗೆ ಹಾಗೂ ಮನೆಯವರಿಗೆ ಯಾವ ರೀತಿಯ ಸಂಬಂಧವಿದೆ ಎಂಬುದನ್ನವಲಂಬಿಸಿ ಆ ಜಗುಲಿಯಲ್ಲಿ ವ್ಯಕ್ತವಾಗುತ್ತವೆ.

ನಾನು ನೀಡಿದ ಜಗುಲಿಯ ಚಿತ್ರಣ ಒಂದು ಉದಾಹರಣೆಯಷ್ಟೆ. ಅಂದರೆ ಭಾರತದಲ್ಲಿ ಪ್ರತೀ ಸ್ವಂತಿಕೆಯೂ ಸಂಬಂಧದ ಜಾಲದ ಭಾಗವಾಗಿದೆ. ಅದು ಒಡನಾಟದ ಸಂದರ್ಭದಲ್ಲಿ ವ್ಯಕ್ತವಾಗುತ್ತದೆ. ಪರಸ್ಪರರು ತಮ್ಮ ತಮ್ಮ ಸ್ವಂತಿಕೆಗಳನ್ನು ಈ ಸಂಬಂಧಗಳ ಮೂಲಕ ರಚಿಸಿಕೊಳ್ಳುತ್ತಿರುತ್ತಾರೆ. ಅಂದರೆ ಅನ್ಯರು ತಮ್ಮನ್ನು ಹೇಗೆ ಭಾವಿಸುತ್ತಾರೆ ಎಂಬುದನ್ನು ಗ್ರಹಿಸುವ ಹಾಗೂ ಆ ಮೂಲಕ ತಮ್ಮ ಸ್ವ ಚಿತ್ರಣವನ್ನು ಕಟ್ಟ್ಟಿಕೊಳ್ಳುವ ಕ್ರಿಯೆಗಳು ಒಡನಾಟದ ಮೂಲಕ ಒಟ್ಟಾಗಿ ನಡೆಯುತ್ತವೆ.

ವ್ಯಕ್ತಿಯ ಸ್ವಂತಿಕೆಯು ಮಾನವ ಸಂಬಂಧಗಳಿಗೆ ಮೂಲಭೂತವಾದ ತಳಹದಿಯನ್ನು ನಿರ್ಮಿಸುತ್ತದೆ ಎಂಬುದಾಗಿ ಪಾಶ್ಚಾತ್ಯ ಮನಃಶಾಸ್ತ್ರವು ಪ್ರತಿಪಾದಿಸುತ್ತದೆ. ಸ್ವಂತಿಕೆ ಎಂಬುದು ಜೇಡದಂತೇ ಎಂಬುದಾಗಿ ಭಾವಿಸಿಕೊಂಡರೆ, ಅದು ಸಂಬಂಧಗಳ ಬಲೆಯನ್ನು ವ್ಯವಸ್ಥಿತವಾಗಿ ನೇಯ್ದುಕೊಳ್ಳಲಿಕ್ಕೆ ಕಾರಣಕರ್ತ. ಸ್ವಂತಿಕೆಯಿಲ್ಲದವನಿಗೆ ಸಂಬಂಧಗಳ ಬಲೆಯನ್ನು ರಚಿಸಲಿಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ಅಂಥ ಸ್ಥಿತಿಯು ರೋಗಗ್ರಸ್ತ ಸ್ಥಿತಿ ಎಂಬುದಾಗಿಯೂ ಮನಃಶಾಸ್ತ್ರಜ್ಞರು ಹೇಳುತ್ತಾರೆ. ನಾವು ಇದುವರೆಗೆ ಪರಿಶೀಲಿಸಿದ ವಿವರಗಳಿಂದ ಪಾಶ್ಚಾತ್ಯ ಮಾದರಿಯ ಸ್ವಂತಿಕೆಯು ನಮ್ಮಲ್ಲಿ ಇಲ್ಲವೇ ಇಲ್ಲ ಎಂಬುದು ಸ್ಪಷ್ಟ. ಅಂದರೆ ನಮ್ಮೊಳಗೇ ಇದೆ ಎಂದು ಅನುಭವಕ್ಕೆ ಬರುವ ನನ್ನತನ ನಮ್ಮಲ್ಲಿಲ್ಲ. ನಾನು ಯಾರು ಎನ್ನುವ ಪ್ರಶ್ನೆಗೆ ನಮ್ಮ ಸಂಸ್ಕೃತಿಯ ಉತ್ತರವೆಂದರೆ ನನ್ನತನವನ್ನು ಕಳೆದುಕೊಳ್ಳುವುದು. ಅಲ್ಲಿ ಈ ಪ್ರಶ್ನೆಯೇ ಇಲ್ಲ. ಅದು ಶೂನ್ಯ. ಈರುಳ್ಳಿಯ ಹೋಲಿಕೆಯನ್ನು ಕೊಡುವುದಾದರೆ, ಈರುಳ್ಳಿಯ ಒಳಗೆ ಏನಿದೆಯೆಂದು ಹುಡುಕಹೋದರೆ, ಸಿಪ್ಪೆಯನ್ನು ಒಂದಾದ ಮೇಲೆ ಮತ್ತೊಂದರಂತೇ ಸುಲಿಯುತ್ತಾ ಕೊನೆಗೆ ಏನೂ ಇಲ್ಲ ಎಂಬುದು ವೇದ್ಯವಾಗುತ್ತದೆ. ಹಾಗೆಯೇ ನಮ್ಮ ಕ್ರಿಯೆಗಳು ಮತ್ತು ಸಂಬಂಧಗಳ ರಚನೆಯನ್ನು ಒಂದೊಂದಾಗಿ ತೆಗೆದುಹಾಕುತ್ತಾ ಹೋದರೆ ನಮ್ಮೊಳಗಿನ ಖಾಲಿತನವಷ್ಟೇ ಉಳಿಯುತ್ತದೆ.

ಈಗ ನಮಗೆ ಇರುವುದು ಎರಡೇ ಆಯ್ಕೆ: 1. ಪಾಶ್ಚಾತ್ಯ ಮನಃಶಾಸ್ತ್ರಜ್ಞರ ವರ್ಣನೆಗಳನ್ನೇ ಪ್ರಮಾಣವಾಗಿಟ್ಟುಕೊಂಡರೆ ಭಾರತೀಯರೆಲ್ಲರೂ ರೋಗಗ್ರಸ್ತರು, ನಮ್ಮ ಅಧ್ಯಾತ್ಮವೂ ರೋಗಿಷ್ಠರ ಹಳವಂಡ ಎನ್ನಬೇಕಾಗುತ್ತದೆ. 2. ಇಲ್ಲ, ಪಾಶ್ಚಾತ್ಯ ಮನಃಶಾಸ್ತ್ರವು ಮಾನವನ ಮನಸ್ಸಿನ ವಿಜ್ಞಾನವಲ್ಲ, ಹೆಚ್ಚೆಂದರೆ ಇದು ಪಾಶ್ಚಾತ್ಯ ವ್ಯಕ್ತಿಯ ಚಿತ್ರಣ. ಪಾಶ್ಚಾತ್ಯ ವ್ಯಕ್ತಿಯ ಚಿತ್ರಣವು ಮನುಕುಲದ ಸತ್ಯವಲ್ಲ ಎನ್ನಬೇಕಾಗುತ್ತದೆ.

ಉತ್ತರದ ಆಯ್ಕೆಯನ್ನು ಓದುಗರಿಗೇ ಬಿಟ್ಟಿದ್ದೇನೆ.

  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ