ಮುಖ ಪುಟ > Uncategorized > ಅಂಕಣ: ನವನೀತ

ಅಂಕಣ: ನವನೀತ

rajaram hegdeಕಂತು 34: ಅಸಹಿಷ್ಣುತೆಯ ಚರ್ಚೆಗೆ ಒಂದು ಅಳಿಲುಸೇವೆ..

ಪ್ರೊ. ರಾಜಾರಾಮ ಹೆಗಡೆ

 ನಮ್ಮ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಕೆಲವು ಪ್ರಗತಿಪರರು ಪ್ರತಿಭಟಿಸುತ್ತಿರುವುದು ಇಂದಿನ ದೊಡ್ಡ ಸುದ್ದಿ. ಈ ಗುಂಪಿನಲ್ಲಿ ಸಾಹಿತಿಗಳು, ಇತಿಹಸಕಾರರು, ವಿಜ್ಞಾನಿಗಳು, ಸಿನೀಮಾ ನಟರು, ರಾಜನೀತಿಜ್ಞರು ಇತ್ಯಾದಿಗಳಿದ್ದಾರೆ. ವಿಶೇಷವೆಂದರೆ ಒಂದು ಕಾಲದಲ್ಲಿ ಬಿಜೆಪಿಯ ಮುಖವಾಣಿಯಾಗಿದ್ದ ಅರುಣ್ ಶೌರಿಯಂಥವರೂ  ಈ ಸಂಗತಿಯನ್ನು ಸಮರ್ಥಿಸಿದ್ದಾರೆ. ಆದರೆ ಇದು ಮೋದಿಯವರ ವಿರುದ್ಧ ಕಾಂಗ್ರೆಸ್ ರಾಜಕೀಯ, ಈ ಹಿಂದೆ ನಡೆಯದಿರುವಂಥದ್ದು ಇಂದು ಏನೂ ನಡೆಯುತ್ತಿಲ್ಲ, ಆಗೆಲ್ಲ ಸುಮ್ಮನಿದ್ದ ಈ ಪ್ರಗತಿಪರರು ಈಗೇಕೆ ಇದನ್ನೊಂದು ಅಸಹಿಷ್ಣುತೆಯ ಸಮಸ್ಯೆಯನ್ನಾಗಿ ಮಾಡುತ್ತಿದ್ದಾರೆ ಎಂಬ ಟೀಕೆಗಳೂ ಸಕಾರಣವಾಗಿ ಎದ್ದಿವೆ.

 ಭಾರತದ ಪ್ರಜಾ ಪ್ರಭುತ್ವದ ಇತಿಹಾಸದಲ್ಲಿ ನಿರ್ದಿಷ್ಟವಾಗಿ ಈ ಕಾಲದಲ್ಲೇ ಏಕೆ ಈ ಪ್ರಶ್ನೆ ಏಳಬೇಕು? ಇದರ ಹಿಂದೆ ಒಂದು ಗ್ರಹಿಕೆ ಕೆಲಸಮಾಡುತ್ತಿದೆ. ಅದೆಂದರೆ ಈಗ ಕೇಂದ್ರದಲ್ಲಿ ಬಿಜೆಪಿ ಪಕ್ಷವು ಪೂರ್ಣ ಬಹುಮತದೊಂದಿಗೆ  ಆಡಳಿತದ ಚುಕ್ಕಾಣಿ ಹಿಡಿದಿದೆ. ಅದು ಹಿಂದುತ್ವ ಅಥವಾ ಹಿಂದೂ ಕೋಮುವಾದಿಗಳ ಪಕ್ಷ ಎಂಬುದಾಗಿ ಹಣೆಪಟ್ಟಿ ಹೊತ್ತುಕೊಂಡಿದೆ. ಅದರಲ್ಲೂ ಮೋದಿಯವರನ್ನು ಆ ಪಕ್ಷದ ತೀರಾ ಉಗ್ರಗಾಮೀ ಮುಂದಾಳು ಎಂಬುದಾಗಿ ಪ್ರಗತಿಪರರು ಭಾವಿಸಿದ್ದಾರೆ. ಕಳೆದ ಲೋಕಸಭೆಯ ಚುನಾವಣೆಯ ಫಲಿತಾಂಶಗಳು ಬರತೊಡಗಿದಾಗಲೇ ಇನ್ನು ಮುಂದೆ ಭಾರತವು ಮತೀಯ ಹಾಗೂ ಜಾತೀಯ ಅಸಹಿಷ್ಣುತೆಯ ದಿನಗಳನ್ನು ಕಾಣಲಿದೆ, ಹಾಗೂ ಪ್ರಗತಿಪರರಿಗೆ  ಭದ್ರತೆಯಿಲ್ಲ ಎಂದು ಸೆಕ್ಯುಲರ್ವಾದಿಗಳು ಆತಂಕಗೊಂಡರು. ಹಾಗೂ ಅಂಥ ದಿನಗಳನ್ನು ನಿರೀಕ್ಷಿಸತೊಡಗಿದರು. ಅದಕ್ಕೆ ತಕ್ಕಂತೆ ಕೇಂದ್ರದಲ್ಲಿ ತಮ್ಮದೇ ಸರ್ಕಾರ ಬಂದಿದೆ ಎಂಬ ಉಮೇದಿನಲ್ಲಿ ಕೆಲವು ಕಟ್ಟರ್ ಹಿಂದುತ್ವದ ಮುಂದಾಳುಗಳು ಹಾಗೂ ಸಂಘಟನೆಗಳು ಗೋವಧೆ ನಿಷೇಧ, ಘರ್ ವಾಪಸಿ, ಲವ್ ಜಿಹಾದ್, ಇತ್ಯಾದಿ ಸಮಸ್ಯೆಗಳನ್ನು ಕೆದರಿಕೊಂಡರು. ಕೇಂದ್ರದ ಸಂಸ್ಥೆಗಳು ಹಾಗೂ ಸಮಿತಿಗಳಲ್ಲಿ ಹಿಂದುತ್ವಕ್ಕೆ ಪರವಾಗಿರುವವರು ಕಾಣಿಸಿಕೊಳ್ಳತೊಡಗಿದರು. ವಿರೋಧಿ ಪಕ್ಷಗಳು ಹಿಂದುತ್ವದ ಹುನ್ನಾರವನ್ನು ಆರೋಪಿಸಿ ಮೋದಿ ಸರ್ಕಾರವನ್ನು ಟೀಕಿಸಲು ಹೊಂಚಿಹಾಕಿದವು. ಈ ಸಂದರ್ಭದಲ್ಲಿ ನಡೆದ  ಕೆಲವು ಹಿಂಸಾತ್ಮಕ ಘಟನೆಗಳನ್ನು ಹಿಂದೂವಾದದ ಅಸಹಿಷ್ಣುತೆಗೆ ತಳಕು ಹಾಕಲಾಗುತ್ತಿದೆ.

 ಇಷ್ಟಾಗಿಯೂ ನಮ್ಮ ದೇಶದಲ್ಲಿ ಜಾತಿ ಹಾಗೂ ಮತೀಯ ಅಸಹಿಷ್ಣುತೆಯು ಇದೆ ಹಾಗೂ ದಿನದಿಂದ ದಿನಕ್ಕೆ ಅದು ಹೆಚ್ಚಾಗುತ್ತಿದೆ  ಎಂಬುದು ವಾಸ್ತವ. ಆದರೆ ಎರಡು ಅಂಶಗಳಲ್ಲಿ ನನ್ನ ವಾದವು ಪ್ರಚಲಿತ ವಾದಕ್ಕಿಂತ ಬೇರೆಯಾಗಿದೆ: 1) ಈಗ ಅಸಹಿಷ್ಣುತೆಯೆಂಬುದಾಗಿ ಯಾವ ಯಾವ ಸಮಸ್ಯೆಗಳನ್ನು ಉಲ್ಲೇಖಿಸಲಾಗುತ್ತಿದೆಯೋ ಅವು ನಮಗೆ ಆಧುನಿಕ ರಾಜಕೀಯದ ಬಳುವಳಿಗಳೇ ವಿನಃ ನಮ್ಮ ಸಾಂಪ್ರದಾಯಿಕ ಸಮಾಜಗಳದ್ದಲ್ಲ. ಹಾಗಾಗಿ ಅವು ಮೋದಿಯವರು ಪ್ರಧಾನಿಯಾದಮೇಲೆ, ಅಥವಾ ಹಿಂದುತ್ವದ ರಾಜಕೀಯದಿಂದ ಹುಟ್ಟಿಕೊಂಡದ್ದಲ್ಲ. 2. ಈ ಅಸಹಿಷ್ಣುತೆಯ ಬೆಳವಣಿಗೆಯಲ್ಲಿ  ಅದರ ವಿರುದ್ಧ ಹೋರಾಡುತ್ತಿರುವ ಪ್ರಗತಿಪರರ ಪಾಲು ಕೂಡ ಬಹಳ ದೊಡ್ಡದು. ಹಾಗಾಗಿ ಅವರು ತಾವು  ಮುಗ್ಧ ಅಮಾಯಕರು ಎಂಬ ಭ್ರಮೆಯಲ್ಲಿ ಇರುವುದು ಬೇಡ.

 ಭಾರತದ ರಾಷ್ಟ್ರೀಯ ರಾಜಕೀಯವು ವಸಾಹತು ಕಾಲದ ಕೆಲವು ತಿಳಿವಳಿಕೆಗಳನ್ನು ಆಧರಿಸಿ ಬೆಳೆದುಕೊಂಡು ಬಂದಿದೆ. ಈ ತಿಳಿವಳಿಕೆಯನ್ನು ಆಧರಿಸಿ ಭಾರತೀಯ ರಾಜಕೀಯದಲ್ಲಿ ಜಾತಿ ಹಾಗೂ ಮತಗಳು ಪ್ರಾಮುಖ್ಯತೆ ಪಡೆದಿವೆ. ಮತೀಯ ರಾಜಕೀಯವು ಪ್ರಾಮುಖ್ಯತೆ ಪಡೆಯುವಲ್ಲಿ ಸೆಕ್ಯುಲರ್ ನೀತಿಗಳು ಕಾರಣವಾದವು. ಜಾತೀಯ ರಾಜಕೀಯವು ಪ್ರಾಮುಖ್ಯತೆ ಪಡೆಯುವಲ್ಲಿ ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಕಾನೂನುಗಳು ಇವೆ ಎಂಬ ಸಿದ್ಧಾಂತವು ಕಾರಣವಾಯಿತು. ಭಾರತೀಯ ರಾಷ್ಟ್ರೀಯ ರಾಜಕೀಯವು ಈ ಸಾಮಾನ್ಯ ಜ್ಞಾನದ ಮೇಲೆ ರಚಿತವಾಗಿದೆ. ಭಾರತದಲ್ಲಿ ಬಹುಸಂಖ್ಯಾತರಿಂದ ಅಲ್ಪ ಸಂಖ್ಯಾತರನ್ನು  ಹಾಗೂ ಮೇಲು ಜಾತಿಗಳಿಂದ ಕೆಳಜಾತಿಗಳನ್ನು ರಕ್ಷಿಸುವ ಕೆಲಸವು ಆದ್ಯತೆ ಪಡೆಯಿತು. ದಮನಿತರನ್ನು ರಕ್ಷಿಸುವ ಕೆಲಸವು ಪ್ರಭುತ್ವದ ಆದ್ಯಕರ್ತವ್ಯವೇ ಅಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕಳೆದ ಅರ್ಧಶತಮಾನಕ್ಕೂ ಹೆಚ್ಚು ಕಾಲ ನಡೆದ ಈ ರಾಜಕೀಯವು  ತಪ್ಪು ಕಲ್ಪನೆಗಳು ಹಾಗೂ ತಪ್ಪು ಪ್ರಯೋಗಗಳಿಂದಾಗಿ ಭಾರತೀಯರಲ್ಲಿ  ಹಿಂದೆ ಕಂಡರಿಯದ ಅಸಹನೆ ಹಾಗೂ ವೈರತ್ವವನ್ನು ಹುಟ್ಟಿಸಿರುವುದೂ ಸುಳ್ಳಲ್ಲ.

 ಮೊದಲನೆಯದಾಗಿ ಹಿಂದೂ ಎಂಬುದು ಬಹುಸಂಖ್ಯಾತರ ರಿಲಿಜನ್ನು ಎಂಬ ನಿರ್ಣಯದ ಮೇಲೆ ಭಾರತೀಯ ಸೆಕ್ಯುಲರ್ ನೀತಿಗಳು ನಿಂತಿವೆ.  ಮತೀಯ ಅಸಹಿಷ್ಣುತೆ ಎಂಬುದು ರಿಲಿಜನ್ನುಗಳ ಲಕ್ಷಣ. ಆದರೆ ಭಾರತದಲ್ಲಿ ಯಾವ ದೇಶೀಯ ರಿಲಿಜನ್ನುಗಳೂ ಇಲ್ಲ ಎಂಬುದು ಇತ್ತೀಚೆಗೆ ನಾವು ಕಂಡುಕೊಂಡ ಸತ್ಯ. ಈಗ ನಾವು ಹಿಂದೂ ಎಂಬುದಾಗಿ ಯಾವ ಸಂಸ್ಕೃತಿಯನ್ನು ಕರೆಯುತ್ತೇವೆಯೋ ಅದು ಬಹುತ್ವಕ್ಕೆ ಮತ್ತೊಂದು ಹೆಸರು ಹಾಗೂ ಅನ್ಯರನ್ನು  ಮಾನ್ಯಮಾಡುತ್ತದೆ. ಆದರೆ ಸೆಕ್ಯುಲರ್ ನೀತಿಯಿಂದಾಗಿ  ಮುಸ್ಲಿಂ ಮುಂತಾದ ರಿಲಿಜನ್ನುಗಳ ಹಿತಾಸಕ್ತಿಯನ್ನು ಕಾಯುವ ಕೆಲಸವನ್ನು ಸೆಕ್ಯುಲರ್ ಸರ್ಕಾರವು  ಪವಿತ್ರ ಕೆಲಸ ಎಂದುಕೊಂಡಿದೆ. ಜೊತೆಗೇ ಹಿಂದೂ ಸಮಾಜವು ಮೌಢ್ಯದ ಮೇಲೆ ನಿಂತಿದೆ, ಅದನ್ನು ಕಾನೂನುಗಳ ಮೂಲಕ ರಿಪೇರಿ ಮಾಡಬೇಕು ಎಂಬುದೂ ಈ ಸೆಕ್ಯುಲರ್ ತಿಳಿವಳಿಕೆಯ ಒಂದು ಭಾಗ. ಇದು ಅಕಾರಣವಾಗಿ ಹಾಗೂ ಪಕ್ಷಪಾತೀ ಧೋರಣೆಯಾಗಿ ಹಿಂದೂಗಳಿಗೆ ಕಾಣಿಸುತ್ತದೆ. ಹಿಂದೂಗಳಲ್ಲೂ ಸಂಘಟನೆಗಳು ಹುಟ್ಟಿಕೊಂಡು  ಅವು ಹಿಂದೂ ಡಾಕ್ಟ್ರಿನ್ನುಗಳು, ಪವಿತ್ರಗ್ರಂಥಗಳು ಎಂದೆಲ್ಲ  ಅಸಹಿಷ್ಣುತೆಯ ನೆಲೆಗಳನ್ನು ಶೋಧಿಸುತ್ತಿವೆ.

 ನಮ್ಮ ರಾಜಕೀಯ ಕೂಡ ಈ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದೆ. ಅದಕ್ಕೆ ಜನಸಾಮಾನ್ಯರು ಸದಾ ಜಾತಿ ಮತಗಳ ಕುರಿತು ಜಾಗೃತರಾಗಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಜಾತಿ ಮತಗಳ ಕುರಿತು ಜಾಗೃತರಾಗಿರುವುದೆಂದರೆ ಅನ್ಯ ಜಾತಿ ಮತಗಳು ತಮ್ಮ ವೈರಿಗಳು, ತಮಗೆ ಅನ್ಯಾಯ ಮಾಡಿದವರು ಎಂಬ ಪ್ರಜ್ಞೆಯನ್ನು ಸದಾ ಕಾಪಾಡಿಕೊಂಡು ಬರಬೇಕಾಗುತ್ತದೆ. ಈ ರಾಜಕೀಯವು ಬೇರು ಬಿಟ್ಟಷ್ಟೂ ಜಾತಿ  ಹಾಗೂ ಮತ ಎಂಬ ಗುಂಪುಗಳು ಗಟ್ಟಿಯಾಗುವುದು ಹಾಗೂ ಅವುಗಳ ನಡುವಿನ ಅವಿಶ್ವಾಸ ವೈರತ್ವಗಳು ಹೆಚ್ಚುವುದು ಸ್ವಾಭಾವಿಕ. ಸರ್ಕಾರದ ನೀತಿ ನಿಯಮಗಳೂ ಕೂಡ ಈ ತಿಳಿವಳಿಕೆಯನ್ನೇ ಆಧರಿಸಿ ಇರುವುದರಿಂದ ಇಂದು ನಮ್ಮ ಸರ್ಕಾರೀ ಸಂಸ್ಥೆಗಳಲ್ಲಿ ಕೆಲಸ ಮಾಡುವವರಲ್ಲಂತೂ ಜಾತಿ ಹಗೂ ಮತೀಯ ವೈಷಮ್ಯತೆ ಹಾಗೂ ಅವಿಶ್ವಾಸಗಳು ಸಹಜವಾಗಿಯೇ ವೃದ್ಧಿಸುತ್ತಿವೆ. ಸಂತೃಸ್ತನೊಬ್ಬನಿಗೆ ಸಹಾಯಮಾಡುವ ಬದಲು ಅದಕ್ಕೆ ಕಾರಣೀಭೂತರಾಗಿರುವವರ ಕುರಿತು ಕಥೆಗಳನ್ನು ಕಟ್ಟಿಕೊಂಡು ತೆಗಳುತ್ತ ಕೂಡ್ರುವುದೇ ಮುಂದಾಳುಗಳ ಹಾಗೂ ಬುದ್ಧಿಜೀವಿಗಳ ಕಾಯಕವಾಗಿದೆ. ಬಹುಶಃ ಇವರೆಲ್ಲ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ಜನರನ್ನು ಸೆಳೆಯಲು ಈ ಮೇಲಿನ ಸಮಸ್ಯೆಗಳನ್ನು ಭಾವನಾತ್ಮಕ ವಿಷಯವನ್ನಾಗಿ ಮಾಡುವುದೇ ಅನುಕೂಲ ಎಂದುಕೊಂಡಂತಿದೆ.

 ಇದರ ಜೊತೆಗೆ ಇನ್ನೂ ಇಂಥ ಅನೇಕ ವೈರಿ ಪ್ರಭೇದಗಳನ್ನು ನಾವು ರಾಜಕೀಯಕ್ಕೆ ಅವಲಂಬಿಸಿಕೊಂಡಿದ್ದೇವೆ. ಭಾಷೆಯನ್ನೊಂದು ಬಡಿದಾಟದ ವಸ್ತುವನ್ನಾಗಿ ಮಾಡಿಕೊಂಡಿದ್ದೇವೆ.   ಆರ್ಯ-ದ್ರಾವಿಡ ಜನಾಂಗಗಳ ಕಲ್ಪನೆಯು ಜನಾಂಗಗಳ ಹೊಡೆದಾಟವನ್ನು ಹುಟ್ಟುಹಾಕಿದರೆ, ಸ್ತ್ರೀವಾದವು ಸಮಸ್ತ ಗಂಡು ಹೆಣ್ಣುಗಳನ್ನೇ ವೈರಿಗಳನ್ನಾಗಿ ಬಿಂಬಿಸುತ್ತದೆ. ಅಂದರೆ ಎರಡು ಪ್ರಭೇದಗಳನ್ನು ಕಲ್ಪಿಸಿ ಒಬ್ಬರಿಂದ ಮತ್ತೊಬ್ಬರಿಗೆ ಅನ್ಯಾಯ ಆಗಿದೆ ಎಂಬುದಾಗಿ ಸಾರುವುದೇ ಈ ಕಥನಗಳಿಗೆ ಮುಖ್ಯ ಹಾಗೂ ಅದೇ ರಾಜಕೀಯದ ಗುರಿ. ಇಂಥ ರಾಜಕೀಯವು ಬೇರು ಬಿಡಬೇಕಾದರೆ ಈ ಅನ್ಯಾಯದ ಕಥೆಯ ಕುರಿತು ಸಂಬಂಧ ಪಟ್ಟವರಲ್ಲಿ ಜಾಗೃತಿ ಮೂಡಿಸಬೇಕು. ಹಾಗೆ ಮೂಡಿಸಿದಾಗ ಅವರಲ್ಲಿ ವೈರತ್ವ ಬೆಳೆಯುತ್ತದೆ,  ಅಂದರೆ ನಮ್ಮ ಇಂದಿನ ಪಕ್ಷ ರಾಜಕೀಯ, ಸಾಮಾಜಿಕ ಸಾಂಸ್ಕೃತಿಕ ಹೋರಾಟಗಳು ಹಾಗೂ ಅದನ್ನು ಸಮರ್ಥಿಸಿಕೊಳ್ಳುವ ಬುದ್ಧಿಜೀವಿಗಳೆಲ್ಲರೂ ಇಂಥ ಅಸಹಿಷ್ಣುತೆಯನ್ನು  ಪೋಷಿಸುವ ತರ್ಕಕ್ಕೆ ಸಿಲುಕಿಕೊಂಡಿದ್ದಾರೆ. ಈ ರಾಜಕೀಯವನ್ನೇ ಒಪ್ಪಿಕೊಂಡು ಪ್ರಶಸ್ತಿಗಳನ್ನು ಹಿಂತಿರುಗಿಸಿದರೆ ಅದು ಪಕ್ಷರಾಜಕೀಯಕ್ಕೆ ಮಾತ್ರ ಪ್ರಯೋಜನ ಆಗಬಲ್ಲದು. ಸಹಿಷ್ಣುತೆಯ ಕುರಿತು ನಿಜವಾದ ಕಾಳಜಿ ಉಳ್ಳವರು ಈ ರಾಜಕೀಯವನ್ನೇ ವಿಮರ್ಶೆಗೊಡ್ಡಬೇಕು.

Categories: Uncategorized
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮ್ಮ ಟಿಪ್ಪಣಿ ಬರೆಯಿರಿ